ಕೂಮರಿನ್

ಒಂದು ಬಗೆಯ ನೈಸರ್ಗಿಕ ಪರಿಮಳ. ಹಲವು ಬಗೆಯ ಸಸ್ಯಗಳಲ್ಲಿ (ಆಸ್ಪಾರೂಲ ಓಡರೆಟ) ಮತ್ತು ಟೌಂಕಕಾಯಿಗಳಲ್ಲಿದೆ.  ಆಗತಾನೆ ಕತ್ತರಿಸಿದ ಒಣಹುಲ್ಲು ಪಸರಿಸಿದ ವಾಸನೆಗೆ ಇದೇ ಕಾರಣ. ಇದನ್ನು ಆಲ್ಕೋಹಾಲಿನಲ್ಲಿ ಸಂಸ್ಕರಿಸಿದ ಟೌಂಕ ಬೀಜಗಳಿಂದ ತಯಾರಿಸಬಹುದು. ಕೃತಕವಾಗಿ ಸ್ಯಾಲಿಸಿಲ್ ಆಲ್ಡಿಹೈಡ್ ಮೇಲೆ ಅಸಿಟಿಕ್ ಆನ್ ಹೈಡ್ರೈಡ್ ಮತ್ತು ಸೋಡಿಯಂ ಅಸಿಟೇಟುಗಳ ವರ್ತನೆಯಿಂದ ತಯಾರಿಸಲಾಗುವುದು(ಪರ್ಕಿನ್ ಕ್ರಿಯೆ). ಇದರ ಅಣುಸೂತ್ರ ಅ 9 ಊ6 ಔ2 .ಕೂಮರಿನ್ ಸಿಸ್ - ಆರ್ಥೋ- ಹೈಡ್ರಾಕ್ಸಿಸಿನ್ನಾಮಿಕ್ ಆಮ್ಲದ (ಕುಮರಿನಿಕ್ ಆಮ್ಲ) ವ್ಯುತ್ಪನ್ನ ಲ್ಯಾಕ್ಟೋನ್. ಇದು ಉತ್ಕರ್ಷಣವನ್ನು ಸಾಕಷ್ಟು ನಿರೋಧಿಸುತ್ತದೆ. ಪೊಟಾಸಿಯಂ ಹೈಡ್ರಾಕ್ಸೈಡಿನೊಡನೆ ಕುದಿಸಿದಾಗ ಕುಮರಿಕ್ ಆಮ್ಲ ಲವಣವನ್ನು ಸೋಡಿಯಂ ಅಮಾಲ್ಗಂನೊಡನೆ ಜಲಮಾಧ್ಯಮದಲ್ಲಿ ಅಪಕರ್ಷಿಸಿದಾಗ ಮೆಲಿಲೊಟಿಕ್ ಆಮ್ಲವನ್ನು ಬ್ರೋಮಿನ್ ಮತ್ತು ಸೋಡಿಯಂ ಬೈ ಸಲ್ಫೇಟುಗಳೊಡನೆ ಅನುಬಂಧ ಸಂಯುಕ್ತಗಳನ್ನು ಕೊಡುತ್ತವೆ. ಕುಮರಿನ್‍ನ ವಜ್ರಾಕೃತಿಯ ಹರಳುಗಳು ಆಲ್ಕೋಹಾಲಿನಲ್ಲಿ ಕೂಡಲೆ ಕರಗುತ್ತವೆ. ಬಿಸಿ ನೀರಿನಲ್ಲಿ ಮಿತವಾಗಿ ಕರಗುತ್ತವೆ. ಕುಮರಿನ್‍ನನ್ನು  ಪರಿಮಳ ದ್ರವ್ಯಗಳಲ್ಲಿ ಮತ್ತು ರುಚಿಕಾರಕವಾಗಿ ಉಪಯೋಗಿಸಲಾಗುವುದು. ಇದರ ವ್ಯುತ್ಪನ್ನಗಳು ಪ್ರಧಾನವಾಗಿ 6, 7- ಡೈ ಹೈಡ್ರಾಕ್ಸಿ ಕುಮರಿನ್‍ಗಳು. ಇವು ಸಸ್ಯ ಜಗತ್ತಿನಲ್ಲಿ ಹೇರಳವಾಗಿದೆ. 

ಚಿತ್ರ-1

ಸಸ್ತನಿಗಳ ಶರೀರ ವಿಜ್ಞಾನದಲ್ಲಿ ಕುಮರಿನಿನ ಪಾತ್ರ ಏನೂ ಇಲ್ಲ. ಆದರೆ ಸಂಶ್ಲೇಷಿತ 3- ಬದಲಿ- 4 - ಹೈಡ್ರಾಕ್ಸಿ ಕುಮರಿನ್‍ಗಳು ತೀಕ್ಷ್ಣವಾದ ಗರಣೆ ನಿರೋಧಕಗಳು. ಪಶುಗಳ ಒಂದು ಬಗೆಯ ರಕ್ತಸ್ರಾವ ಜಾಡ್ಯಕ್ಕೆ 3,3'-ಮೆಥಿಲಿನ್ ಬಿಸ್  (4-ಹೈಡ್ರಾಕ್ಸಿ ಕುಮರಿನ್) ಕಾರಣಕರ್ತ.  ಡೈಕೊಮೊರಾಲ್ ಹೆಸರಿನ ಈ ಸಂಶ್ಲೇಷಿತ ವಸ್ತುವಿಗೆ ವೈದ್ಯದಲ್ಲಿ ಅನೇಕ ರಕ್ತಗರಣೆ ರೋಗಲಕ್ಷಣಗಳನ್ನು ತಡೆಗಟ್ಟಲು ಗರಣೆ ನಿರೋಧಕವಾಗಿ ತುಂಬಾ ಉಪಯೋಗವುಂಟು. ವಾರ್‍ಫರಿನ್ ಬಹುಸತ್ವಯುತವಾದ ಮತ್ತೊಂದು ಸಂಶ್ಲೇಷಿತ ಕೂಮರಿನ್. ಇದು ಇಲಿಗಳ ನಿಯಂತ್ರಣದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದೆ.  ಸ್ವಲ್ಪ ಪ್ರಮಾಣದಲ್ಲಿ(0.025 %) ಇದನ್ನು ಮೂರರಿಂದ ಐದು ದಿವಸಗಳ ವರೆಗೆ ಸೇವಿಸಿದ ಇಲಿಗಳು 7ರಿಂದ 10 ದಿವಸಗಳಲ್ಲಿ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪುತ್ತದೆ. ಕೂಮರಿನ್ ಮತ್ತು ಸಂಬಂಧಿತ ಸಂಯುಕ್ತಗಳ ಅಣುರಚನೆಯನ್ನು ಚಿತ್ರದಲ್ಲಿ ತೋರಿಸಿದೆ.  

                     (ಎಲ್.ಎ.ಆರ್.; ಎ.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ